'ವಿಶ್ವಮಾನವ' ಎಂದಾಕ್ಷಣ ನಮಗೆ ನೆನಪಾಗುವುದು ನಮ್ಮ ರಾಷ್ಟ್ರಕವಿ ಶ್ರೀಕುವೆಂಪು. 'ಮನೆಯನೆಂದೂ ಕಟ್ಟದಿರು, ನೆಲೆಯನೆಂದೂ ಮುಟ್ಟದಿರು, ನೀ ಅನಂತವಾಗಿರು,' 'ಓ ನನ್ನ ಚೇತನ, ಆಗು ನೀ ಅನಿಕೇತನ', 'ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು', ಎಂದು ಕರೆ ನೀಡುವ ಮೂಲಕ ಇಡೀ ಕನ್ನಡ ವಿಶ್ವಕ್ಕೆ 'ವಿಶ್ವಮಾನವ' ಸಂದೇಶವನ್ನು ನೀಡಿದ ಈ ಶತಮಾನದ ಸಾಹಿತ್ಯ ಶಿಖರ ಅವರು. ಅವರ 'ವಿಶ್ವಮಾನವ' ಸಂದೇಶವನ್ನು ನಾವೆಲ್ಲರೂ ನಡೆ,ನುಡಿಯಲ್ಲಿ ಅಳವಡಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ. ಹಾಗಾಗಿ, ಜಾತಿ, ಮತ, ಧರ್ಮ ಎಲ್ಲಾ ಜೊಳ್ಳುಗಳ ಹೊಟ್ಟು ತೂರಿ 'ವಿಶ್ವಮಾನವ'ನಾಗುವ ನನ್ನ ಪ್ರಯತ್ನದ ಒಂದು ಅಭಿವ್ಯಕ್ತಿಯೇ ಈ ಜಾಲತಾಣ.
ಹಾಗೆಯೇ, ತಮ್ಮ ಉನ್ನತ ಬದುಕಿನ ಮೂಲಕ ಮಾನವ ಕುಲಕ್ಕೇ ಬೆಳಕು ತೋರಿದ ಬುದ್ಧ, ಮಹಾವೀರ, ಅಲ್ಲಮ, ಬಸವರಾದಿಯಾಗಿ, ನಮ್ಮೆಲ್ಲಾ ವಚನಕಾರರು, ಆಧುನಿಕ ಭಾರತದ ಸಂತರೆಂದೇ ಹೇಳಬಹುದಾದ ಶ್ರೀರಾಮಕೃಷ್ಣ, ಶ್ರೀರಮಣ, ಶ್ರೀ ಅರವಿಂದರು, ಶ್ರೀ ಸ್ವಾಮಿ ವಿವೇಕಾನಂದರು, ಜಿಡ್ಡು ಕೃಷ್ಣಮೂರ್ತಿ, ಗಾಂಧಿ, ಓಶೋ ಮುಂತಾದ ಮಹನೀಯರನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತಾ ನನ್ನ ಅನುಭವಕ್ಕೆ ಬರುವುದರಲ್ಲಿ ನಾನು ಅಭಿವ್ಯಕ್ತಗೊಳಿಸಬಹುದಾದವನ್ನು ಈ ಜಾಲತಾಣದಲ್ಲಿ ನನ್ನ ಸನ್ಮಿತ್ರರೊಂದಿಗೆ ಹಂಚಿಕೊಳ್ಳುವ ಒಂದು ಚಿಕ್ಕ ಪ್ರಯತ್ನವಾಗಿ ರೂಪುಗೊಂಡಿರುವ ಈ ಜಾಲತಾಣವನ್ನು ನಿಮಗರ್ಪಿಸುತ್ತಿದ್ದೇನೆ.